-
ಒಂದು ಕಬ್ಬಿಣದ ಆಯತಘನವು ಮರಳಿನ ಮೇಲೆ ಉಂಟುಮಾಡುವ ಒತ್ತಡವನ್ನು ಅಧ್ಯಯನ ಹಾಗೂ ಹೋಲಿಕೆ ಮಾಡಲು ಅದರ ದ್ರವ್ಯರಾಶಿ ಮತ್ತು ತೂಕವನ್ನು ಕಂಡುಹಿಡಿಯಬೇಕು. ನೀವು ಒಂದು ವಸ್ತುವಿನ ದ್ರವ್ಯರಾಶಿಯನ್ನು ವ್ಯಾಖ್ಯಾನಿಸಬಲ್ಲರೇ ? ಒಂದು ವಸ್ತುವಿನ ದ್ರವ್ಯರಾಶಿಯು ಆ ವಸ್ತುವಿನ ಮೂಲಭೂತ ಗುಣವಾಗಿದೆ. ಆ ವಸ್ತುವಿನ ಜಡತ್ವವನ್ನು ಅಳತೆ ಮಾಡುವ ಅಂಕಿಯಾಗಿದೆ. ಆ ವಸ್ತುವಿನಲ್ಲಿರುವ ಒಟ್ಟು ದ್ರವ್ಯದ ಮೂಲಭೂತ ಅಳತೆಯಾಗಿದೆ. ದ್ರವ್ಯರಾಶಿಯ ಸಾಮಾನ್ಯ ಸಂಕೇತ ‘m’ ಮತ್ತು ಅದರ ಅಂತರಾಷ್ಟ್ರೀಯ ಏಕಮಾನ ಕಿಲೋಗ್ರಾಂಗಳು. ಪ್ರತಿನಿತ್ಯದ ಬಳಕೆಯಲ್ಲಿ ದ್ರವ್ಯರಾಶಿಯನ್ನು ತೂಕವೆಂದೂ, ಅವುಗಳ ಏಕಮಾನಗಳನ್ನು ಕಿಲೊಗ್ರಾಂಗಳೆಂದು ಪರಿಗಣಿಸುತ್ತೇವೆ. ವೈಜ್ಞಾನಿಕವಾಗಿ ತೂಕವನ್ನು ಯಾವುದೇ ವಸ್ತುವಿನಮೇಲೆ ವರ್ತಿಸುತ್ತಿರುವ ಗುರುತ್ವಾಕರ್ಷಣಾಬಲ ಎಂದು ವ್ಯಾಖ್ಯಾನಿಸಬಹುದು. ಆದರೆ ದ್ರವ್ಯರಾಶಿಯು ವಸ್ತುವಿನ ಸಹಜ ಗುಣವಾಗಿರುತ್ತದೆ.
-
ಶಬ್ದ ಪ್ರಸಾರವಾಗಲು ಒಂದು ಮಾಧ್ಯಮದ ಅವಶ್ಯಕತೆಯಿದೆ ಶಬ್ದವು ನೀಳತರಂಗವಾಗಿ ಪ್ರಸಾರವಾಗುತ್ತದೆ ಮತ್ತು ಪ್ರಸಾರವಾಗಲು ಮಾಧ್ಯಮದ ಅವಶ್ಯಕತೆಯಿದೆ. ಶಬ್ದವು ಯಾವಾಗಲೂ ಒಂದು ಕಂಪಿಸುವ ವಸ್ತುವಿನಿಂದ ಉಂಟಾಗುತ್ತದೆ. ಶೃತಿಕವೆ, ಡೋಲು, ಘಂಟೆಗಳು, ವೀಣೆಯ ತಂತಿಗಳು ಇತ್ಯಾದಿಗಳಿಂದ ಈ ಕಂಪನಗಳು ಉಂಟಾಗುತ್ತವೆ. ಮಾನವನಲ್ಲಿ ಧ್ವನಿಯು ಧ್ವನಿತಂತುಗಳ ಕಂಪನದಿಂದ ಉಂಟಾಗುತ್ತದೆ ಮತ್ತು ಸಂಗೀತ ವಾದ್ಯಗಳಿಂದ ಶಬ್ದವು ವಾದ್ಯಗಳಲ್ಲಿ ತುಂಬಿರುವ ಗಾಳಿಯ ಕಂಪನದಿಂದ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಶಬ್ದ ಉತ್ಪತ್ತಿ ಮಾಡುವ ವಸ್ತುವಿನ ಕಂಪನಗಳು ಎಷ್ಟು ಕಡಿಮೆ ಅಥವ ಹೆಚ್ಚಾಗಿರುತ್ತವೆಂದರೆ ಮಾನವನ ಕಿವಿಗಳು ಅದನ್ನು ಗ್ರಹಿಸಲಾರವು. ಮಾನವನ ಶ್ರವಣ ಶ್ರೇಣಿಯ ಆವೃತ್ತಿಯು 20 ಹಟ್ರ್ಜ್ ನಿಂದ 20000 ಹಟ್ರ್ಜ್ ವರೆಗೆ ವ್ಯಾಪಿಸಿದೆ. 20 ಹಟ್ರ್ಜ್ಗಿಂತ ಕಡಿಮೆ ಆವೃತ್ತಿಯ ಶಬ್ದವನ್ನು ಅವಧ್ವನಿ ಎಂದೂ, 20000 ಹಟ್ರ್ಜ್ಗಿಂತ ಹೆಚ್ಚಿನ ಆವೃತ್ತಿಯುಳ್ಳ ಶಬ್ದವನ್ನು ಶ್ರವಣಾತೀತ ಧ್ವನಿ ಎಂದು ಕರೆಯುತ್ತಾರೆ. ಘಂಟಾಪಾತ್ರೆಯ ಪ್ರಯೋಗವು ಶಬ್ದ ಪ್ರಸಾರಕ್ಕೆ ಮಾಧ್ಯಮ ಅವಶ್ಯಕ ಎಂದು ರುಜುವಾತುಪಡಿಸಲು ಮಾಡುವ ಸಾಮಾನ್ಯ ಪ್ರಯೋಗವಾಗಿದೆ.
-
ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ. ಎರಡೂ ಬಲಗಳು ವಿಭಿನ್ನ ವಸ್ತುಗಳ ಮೇಲೆ ಪ್ರಯೋಗವಾಗುವುದರಿಂದ ಅವುಗಳು ತಟಸ್ಥವಾಗುವುದಿಲ್ಲ. ಆದ್ದರಿಂದ ನ್ಯೂಟನ್ನನ ಮೂರನೇ ನಿಯಮವು ಎರಡು ವಿಭಿನ್ನ ವಸ್ತುಗಳ ನಡುವಿನ ಬಲಗಳ ನಡುವಣ ನಡೆಯುವ ಪರಸ್ಪರ ಕ್ರಿಯೆಯನ್ನು ವಿವರಿಸುತ್ತದೆ.