Description
ಎರಡು ಸ್ಪ್ರಿಂಗ್ ತುಲಾಯಂತ್ರಗಳನ್ನು ಬಳಸಿ ನ್ಯೂಟನ್ನನ ಚಲನೆಯ ಮೂರನೇ ನಿಯಮವನ್ನು ಅಧ್ಯಯನ ಮಾಡುವುದು.
ಪಠ್ಯಭಾಗ
ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ.
ಎರಡೂ ಬಲಗಳು ವಿಭಿನ್ನ ವಸ್ತುಗಳ ಮೇಲೆ ಪ್ರಯೋಗವಾಗುವುದರಿಂದ ಅವುಗಳು ತಟಸ್ಥವಾಗುವುದಿಲ್ಲ. ಆದ್ದರಿಂದ ನ್ಯೂಟನ್ನನ ಮೂರನೇ ನಿಯಮವು ಎರಡು ವಿಭಿನ್ನ ವಸ್ತುಗಳ ನಡುವಿನ ಬಲಗಳ ನಡುವಣ ನಡೆಯುವ ಪರಸ್ಪರ ಕ್ರಿಯೆಯನ್ನು ವಿವರಿಸುತ್ತದೆ.
ಯಾವುದೇ ಸಂದಭದಲ್ಲಿ ಎರಡು ವಸ್ತುಗಳು ಪರಸ್ಪರ ಕ್ರಿಯೆ ನೆಡೆಸಿದಾಗ , ಮೊದಲನೇ ವಸ್ತುವು ಪ್ರಯೋಗಿಸುವ
ಬಲವನ್ನು ‘ಕ್ರಿಯೆ’ ಎನ್ನುವರು. ಎರಡನೇ ವಸ್ತುವು ಪ್ರಯೋಗಿಸುವ ಬಲವನ್ನು ‘ಪ್ರತಿಕ್ರಿಯೆ’ ಎನ್ನುವರು. ಈ ‘ಕ್ರಿಯೆ’ ಮತ್ತು ‘ಪ್ರತಿಕ್ರಿಯೆ’ ಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ.
ಉದಾಹರಣೆಗೆ, ನೆಲದ ಮೇಲೆ ಒಂದು ಮರದ ಹಲಗೆಯನ್ನು ಇರಿಸಿದಾಗ, ಹಲಗೆಯು ತನ್ನ ತೂಕಕ್ಕೆ ಸಮನಾದ ಬಲ(W = mg) ವನ್ನು ಕೆಳಮುಖವಾಗಿ ನೆಲದ ಮೇಲೆ ಪ್ರಯೋಗಿಸುತ್ತದೆ. ಇದು ಕ್ರಿಯೆ ಬಲ. ಇದಕ್ಕೆ ಪ್ರತಿಕ್ರಿಯೆಯಾಗಿ ನೆಲವೂ ಸಹ ಇದಕ್ಕೆ ಸಮನಾದ ಮತ್ತು ವಿರುದ್ಧವಾದ ಬಲ(W’ = mg)ವನ್ನು ಮರದ ಹಲಗೆಯ ಮೇಲೆ ಮೇಲ್ಮುಖವಾಗಿ ಪ್ರಯೋಗಿಸುತ್ತದೆ. ಇದು ಪ್ರತಿಕ್ರಿಯೆ ಬಲ.
ನ್ಯೂಟನ್ನನ ಚಲನೆಯ ಮೂರನೆಯ ನಿಯಮದ ಅನ್ವಯಗಳು
1. ಪಿಸ್ತೂಲಿನಿಂದ ಗುಂಡನ್ನು ಹಾರಿಸಿದಾಗ ಪಿಸ್ತೂಲನ್ನು ಗುಂಡು ಹಿಂದೊದೆಯುತ್ತದೆ.
ಪಿಸ್ತೂಲಿನಿಂದ ಗುಂಡನ್ನು ಹಾರಿಸಿದಾಗ ಪಿಸ್ತೂಲು ಗುಂಡಿನ ಮೇಲೆ ಮುಮ್ಮುಖವಾಗಿ ಬಲ ಪ್ರಯೋಗಿಸುತ್ತದೆ.
ಇದು ಕ್ರಿಯೆ. ಗುಂಡು ಕೂಡ ಅಷ್ಟೇ ಪರಿಮಾಣದ ಬಲವನ್ನು ಹಿಮ್ಮುಖವಾಗಿ ಪಿಸ್ತೂಲಿನ ಮೇಲೆ ಪ್ರಯೋಗಿಸುತ್ತದೆ. ಇದು ಪ್ರತಿಕ್ರಿಯೆ. ಪಿಸ್ತೂಲಿನ ರಾಶಿ ಹೆಚ್ಚಾಗಿರುವುದರಿಂದ ಅದು ಕೊಂಚ ಹಿಂದಕ್ಕೆ ಜರುಗಿ ಪಿಸ್ತೂಲು ಹಾರಿಸುವವನ ತೋಳನ್ನು ಕದಲುವಂತೆ ಮಾಡುತ್ತದಷ್ಟೆ. ಹೀಗೆ ಪಿಸ್ತೂಲು ಹಿಂದಕ್ಕೆ ಜರುಗುವುದನ್ನು
ಹಿಂದೊದೆಯುವುದು (recoiling) ಎನ್ನುವರು.
2. ಒಬ್ಬ ವ್ಯಕ್ತಿ ನೆಲದ ಮೇಲೆ ನಡೆಯುವುದು.
3. ದೋಣಿಯನ್ನು ಹುಟ್ಟು ಹಾಕುವುದು
4. ಈಜುವಾಗ ವ್ಯಕ್ತಿಯು ಮುಂದೆ ಸಾಗುವುದು.
5. ರಾಕೆಟ್ ಸಂಚಾಲನೆ
ಕಲಿವಿನ ಫಲಗಳು
ವಿದ್ಯಾರ್ಥಿಯು ಇವುಗಳನ್ನು ಅರ್ಥೈಸಿಕೊಳ್ಳುವನು
ಕ್ರಿಯೆ
ಪ್ರತಿಕ್ರಿಯೆ
ನ್ಯೂಟನ್ನನ ಚಲನೆಯ ಮೂರನೆಯ ನಿಯಮ