Description
ಶಬ್ದ ಪ್ರಸಾರವಾಗಲು ಮಾಧ್ಯಮದ ಅವಶ್ಯಕತೆ ಇದೆಯೆಂದು ರುಜುವಾತುಪಡಿಸುವುದು.
ಶಬ್ದ ಎಂದರೇನು?
ಶಬ್ದವು ಒಂದು ಯಾಂತ್ರಿಕ ತರಂಗ. ಅದು ಪ್ರಸಾರವಾಗಲು ಗಾಳಿ, ನೀರು, ಉಕ್ಕು ಇತ್ಯಾದಿ ದ್ರವ್ಯ ಮಾಧ್ಯಮದ ಅವಶ್ಯಕತೆ ಇದೆ. ಶಬ್ದದ ಆವೃತ್ತಿ, ತರಂಗದೂರ ಮತ್ತು ವೇಗ ಇವುಗಳ ಮೂಲಕ ಶಬ್ದದ ವಿವರಣೆಯನ್ನು ನೀಡಬಹುದು. ಶಬ್ದವು ನೀಳತರಂಗ. ಅಂದರೆ, ಮಾಧ್ಯಮದ ಕಣಗಳು ತರಂಗದ ಚಲನೆಯ ದಿಕ್ಕಿನಲ್ಲಿಯೇ ಕಂಪಿಸುತ್ತವೆ.
ಶಬ್ದ ಪ್ರಸಾರವಾಗಲು ಒಂದು ಮಾಧ್ಯಮದ ಅವಶ್ಯಕತೆಯಿದೆ
ಶಬ್ದವು ನೀಳತರಂಗವಾಗಿ ಪ್ರಸಾರವಾಗುತ್ತದೆ ಮತ್ತು ಪ್ರಸಾರವಾಗಲು ಮಾಧ್ಯಮದ ಅವಶ್ಯಕತೆಯಿದೆ. ಶಬ್ದವು ಯಾವಾಗಲೂ ಒಂದು ಕಂಪಿಸುವ ವಸ್ತುವಿನಿಂದ ಉಂಟಾಗುತ್ತದೆ. ಶೃತಿಕವೆ, ಡೋಲು, ಘಂಟೆಗಳು, ವೀಣೆಯ ತಂತಿಗಳು ಇತ್ಯಾದಿಗಳಿಂದ ಈ ಕಂಪನಗಳು ಉಂಟಾಗುತ್ತವೆ.
ಮಾನವನಲ್ಲಿ ಧ್ವನಿಯು ಧ್ವನಿತಂತುಗಳ ಕಂಪನದಿಂದ ಉಂಟಾಗುತ್ತದೆ ಮತ್ತು ಸಂಗೀತ ವಾದ್ಯಗಳಿಂದ ಶಬ್ದವು ವಾದ್ಯಗಳಲ್ಲಿ ತುಂಬಿರುವ ಗಾಳಿಯ ಕಂಪನದಿಂದ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಶಬ್ದ ಉತ್ಪತ್ತಿ ಮಾಡುವ ವಸ್ತುವಿನ ಕಂಪನಗಳು ಎಷ್ಟು ಕಡಿಮೆ ಅಥವ ಹೆಚ್ಚಾಗಿರುತ್ತವೆಂದರೆ ಮಾನವನ ಕಿವಿಗಳು ಅದನ್ನು ಗ್ರಹಿಸಲಾರವು. ಮಾನವನ ಶ್ರವಣ ಶ್ರೇಣಿಯ ಆವೃತ್ತಿಯು 20 ಹಟ್ರ್ಜ್ ನಿಂದ 20000 ಹಟ್ರ್ಜ್ ವರೆಗೆ ವ್ಯಾಪಿಸಿದೆ. 20 ಹಟ್ರ್ಜ್‍ಗಿಂತ ಕಡಿಮೆ ಆವೃತ್ತಿಯ ಶಬ್ದವನ್ನು ಅವಧ್ವನಿ ಎಂದೂ, 20000 ಹಟ್ರ್ಜ್‍ಗಿಂತ ಹೆಚ್ಚಿನ ಆವೃತ್ತಿಯುಳ್ಳ ಶಬ್ದವನ್ನು ಶ್ರವಣಾತೀತ ಧ್ವನಿ ಎಂದು ಕರೆಯುತ್ತಾರೆ.
ಘಂಟಾಪಾತ್ರೆಯ ಪ್ರಯೋಗವು ಶಬ್ದ ಪ್ರಸಾರಕ್ಕೆ ಮಾಧ್ಯಮ ಅವಶ್ಯಕ ಎಂದು ರುಜುವಾತುಪಡಿಸಲು ಮಾಡುವ ಸಾಮಾನ್ಯ ಪ್ರಯೋಗವಾಗಿದೆ.
ಘಂಟಾಪಾತ್ರೆ ಎಂದರೇನು?
ಘಂಟಾಪಾತ್ರೆಯು ಪ್ರಯೋಗಾಲಯದಲ್ಲಿ ನಿರ್ವಾತವನ್ನು ಸೃಷ್ಟಿಸಲು ಉಪಯೋಗಿಸುವ ಉಪಕರಣವಾಗಿದೆ. ಅದು ಘಂಟೆಯ ಆಕಾರದಲ್ಲಿರುವುದರಿಂದ ಈ ಹೆಸರನ್ನು ಇಡಲಾಗಿದೆ. ಒಂದು ಕೊಳವೆಯ ಮೂಲಕ ನಿರ್ವಾತ ರೇಚಕಕ್ಕೆ ಸಂಪರ್ಕಿಸಲು ಅನುವಾಗುವಂತೆ ಘಂಟಾಪಾತ್ರೆಯನ್ನು ಒಂದು ಸಮತಟ್ಟಾದ ಆಧಾರದ ಮೇಲೆ ಇರಿಸಲಾಗುತ್ತದೆ. ಘಂಟಾಪಾತ್ರೆಯಿಂದ ಗಾಳಿಯನ್ನು ಹೊರತೆಗೆಯುವ ಮೂಲಕ ಅದರ ಒಳಗಿನ ಗಾಳಿಯ ಒತ್ತಡವನ್ನು ಬದಲಾಯಿಸಬಹುದು.
ಪ್ರಯೋಗ ಹೇಗೆ ಸಾಗುತ್ತದೆ?
ಘಂಟಾಪಾತ್ರೆಯೊಳಗೆ ಒಂದು ವಿದ್ಯುತ್ ಘಂಟೆಯನ್ನು ತೂಗುಹಾಕಲಾಗುತ್ತದೆ. ಘಂಟಾಪಾತ್ರೆಯೊಳಗಿನಿಂದ ನಿರ್ವಾತ ರೇಚಕ ಉಪಯೋಗಿಸಿ ಗಾಳಿಯನ್ನು ಹೊರತೆಗೆಯುತ್ತಾ ಬಂದಂತೆ ಶಬ್ದವು ಕ್ಷೀಣಿಸುತ್ತಾ ಹೋಗುತ್ತದೆ. ನಿರ್ವಾತಗೊಳಿಸುವ ಈ ಯಾವುದೋ ಒಂದು ಹಂತದಲ್ಲಿ ಘಂಟೆ ಬಾರಿಸುವುದು ಕಾಣುತ್ತಿದ್ದರೂ ಯಾವುದೇ ಶಬ್ದ ಕೇಳಿಸುವುದಿಲ್ಲ. ಘಂಟಾಪಾತ್ರೆಯಲ್ಲಿ ನಿರ್ವಾತ ಏರ್ಪಟ್ಟಿರುವುದರಿಂದ ಯಾವುದೇ ಶಬ್ದ ಕೇಳಿಸುವುದಿಲ್ಲ. ಈ ಪ್ರಯೋಗದಿಂದ ಶಬ್ದವು ನಿರ್ವಾತದಲ್ಲಿ ಪ್ರಸಾರವಾಗುವುದಿಲ್ಲವೆಂದು ರುಜುವಾತಾಗುತ್ತದೆ. ಅಂದರೆ, ಶಬ್ದ ಪ್ರಸಾರವಾಗಲು ಒಂದು ಮಾಧ್ಯಮ ಅವಶ್ಯಕವಾಗಿದೆ.
ಕಲಿವಿನ ಫಲ
ಶಬ್ದ ಪ್ರಸಾರಾಗಲು ಒಂದು ಮಾಧ್ಯಮ ಅವಶ್ಯಕ ಎಂದು ತೀರ್ಮಾನಿಸಬಹುದು.